ಶಿರಾಳಕೊಪ್ಪ (ಜೂನ್ 5-2026): “ಪ್ರಕೃತಿಯಿಂದ ಪ್ರೇರಿತ ಹವಾಮಾನಕ್ಕಾಗಿ, ನಮ್ಮ ಭವಿಷ್ಯಕ್ಕಾಗಿ” ಎಂಬ ವಿಶ್ವ ಪರಿಸರ ದಿನಾಚರಣೆಯ ಈ ವರ್ಷದ ಧೇಯ ವಾಕ್ಯ ಮತ್ತು ಆಶಯದೊಂದಿಗೆ ಪಟ್ಟಣದ ಪುರಸಭೆ, ಬನಶಂಕರಿ ಹಾಗೂ ಲಕ್ಷ್ಮಿ ಮಹಿಳಾ ಸ್ವಸಹಾಯ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಟ್ಟಣದ ಹೊಂಡದ ಆಂಜನೇಯ ಸ್ವಾಮಿ ಪಾರ್ಕ್ ಅಭಿವೃದ್ಧಿ, ಸಸಿಗಳ ನೆಡುವಿಕೆ, ರಕ್ಷಣೆ ಮತ್ತು ಬಸ್‌ಸ್ಟ್ಯಾಂಡ್ ವೃತ್ತದ ರಸ್ತೆ ವಿಭಜಕಗಳಲ್ಲಿ (ಡಿವೈಡರ್‌ಗಳಲ್ಲಿ) 6 ಬೃಹತ್ ಗಾತ್ರದ ಆಕರ್ಷಕ ಪಾಮ್ ಗಿಡಗಳನ್ನು ನೆಡುವುದರ ಮೂಲಕ ಹಸಿರು ಕ್ರಾಂತಿಗೆ ಚಾಲನೆ ನೀಡಲಾಯಿತು.

ಹೈದರಾಬಾದ್ ಪ್ರವಾಸ ತಂದ ಪ್ರೇರಣೆ: ಮುಖ್ಯಾಧಿಕಾರಿ ಪರಶುರಾಮ ಕಾರ್ಯಕ್ರಮದಲ್ಲಿ ಮಾತನಾಡಿ ಸರ್ಕಾರದಿಂದ ಪುರಸಭೆ ಸಿಬ್ಬಂದಿ ಹಾಗೂ ಪೌರಕಾರ್ಮಿಕರಿಗಾಗಿ ಆಯೋಜಿಸಿದ್ದ ಹೈದರಾಬಾದ್ ಪ್ರವಾಸ ನಮಗೆ ಹೊಸ ದಾರಿಯನ್ನೇ ತೋರಿಸಿದೆ. ಅಲ್ಲಿನ ಪರಿಸರ ಕ್ರಿಯಾ ಯೋಜನೆಗಳು ಮತ್ತು ಅಭಿವೃದ್ಧಿ ಮಾದರಿಗಳು ನಮ್ಮ ಪಟ್ಟಣವನ್ನೂ ಏಕೆ ಇಷ್ಟೇ ಸುಂದರವಾಗಿ ಮಾರ್ಪಡಿಸಬಾರದು ಎಂಬ ಆಲೋಚನೆಗೆ ಪ್ರೇರಣೆ ನೀಡಿದವು. ಈ ನಿಟ್ಟಿನಲ್ಲಿ ಇಂದು ಪಾರ್ಕ್ ಮತ್ತು ರಸ್ತೆಗಳ ಸುಂದರೀಕರಣ ಕಾರ್ಯ ಕೈಗೊಳ್ಳಲಾಗಿದೆ. ಸಾರ್ವಜನಿಕರು ಇವುಗಳನ್ನು ತಮ್ಮ ಸ್ವಂತ ಆಸ್ತಿಯಂತೆ ಕಾಪಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹಸಿ ಕಸದಿಂದ ತಯಾರಾದ ಗೊಬ್ಬರದ ಬಳಕೆ: ಪರಿಸರ ಇಂಜಿನಿಯರ್ ರಾಘವೇಂದ್ರ ಮಾತನಾಡಿ, ಪಟ್ಟಣದ ರಸ್ತೆ ವಿಭಜಕಗಳು ಹಸಿರಿನಿಂದ ಕಂಗೊಳಿಸಲು ದೊಡ್ಡ ಪಾಮ್ ಹಾಗೂ ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ವಿಶೇಷವೆಂದರೆ, ಈ ಗಿಡಗಳಿಗೆ ಪುರಸಭೆಯು ಸಾರ್ವಜನಿಕರಿಂದ ಸಂಗ್ರಹಿಸಿದ ಹಸಿ ಕಸದಿಂದ ಸ್ಥಳೀಯವಾಗಿಯೇ ತಯಾರಿಸಿದ

ಸಾವಯವ ಗೊಬ್ಬರವನ್ನು ಬಳಸಲಾಗಿದೆ. ಇಲಾಖೆಯ ಸಿಬ್ಬಂದಿ ಮತ್ತು ಸಾರ್ವಜನಿಕರ ಈ ಸಹಭಾಗಿತ್ವ ಶ್ಲಾಘನೀಯ. ಪರಿಸರ ದಿನಾಚರಣೆ ಕೇವಲ ಒಂದು ದಿನದ ಆಚರಣೆಯಾಗದೆ, ದಿನನಿತ್ಯದ ಜವಾಬ್ದಾರಿಯಾಗಬೇಕು ಎಂದರು.
ಪರಿಸರ ಸ್ವಚ್ಛತಾ ರಾಯಭಾರಿ ಜಿ.ಎನ್. ಅರುಣ್ ಕುಮಾರ್ ಮಾತನಾಡಿ, ನಾವು ಮುಂದಿನ ಪೀಳಿಗೆಗೆ ಸುರಕ್ಷಿತ ಮತ್ತು ನಿರಾತಂಕವಾದ ವಾತಾವರಣವನ್ನು ಬಿಟ್ಟು ಹೋಗಬೇಕಾದರೆ, ಇಂದು ಗಿಡ-ಮರಗಳನ್ನು ಬೆಳೆಸುವುದು ಮತ್ತು ಪರಿಸರವನ್ನು ರಕ್ಷಿಸುವುದು ನಮಗೆ ಅನಿವಾರ್ಯ ಕರ್ತವ್ಯವಾಗಿದೆ” ಎಂದು ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಮುದಾಯ ಸಂಘಟನಾಧಿಕಾರಿ ಬಾಲಾಜಿ ರಾವ್, ವ್ಯವಸ್ಥಾಪಕ ನಿರಂಜನ್, ಕಿರಿಯ ಅಭಿಯಂತರ ಶೇಖರ್ ನಾಯಕ್, ಹಿರಿಯ ಆರೋಗ್ಯ ನಿರೀಕ್ಷಕ ಪ್ರವೀಣ್,ಬನಶಂಕರಿ ಹಾಗೂ ಲಕ್ಷ್ಮಿ ಸ್ವಸಹಾಯ ಸಂಘಗಳ ಪದಾಧಿಕಾರಿಗಳು, ಪುರಸಭೆಯ ಸಮಸ್ತ ಸಿಬ್ಬಂದಿ ವರ್ಗ ಹಾಗೂ ಪೌರಕಾರ್ಮಿಕರು ಸಕ್ರಿಯವಾಗಿ ಪಾಲ್ಗೊಂಡಿದ್ದರು.
ವರದಿ: ನವೀದ್ ಶಿರಾಳಕೊಪ್ಪ 9538633929

