Headlines

ರೈತರ ಸಬಲೀಕರಣಕ್ಕೆ ಮುನ್ನುಡಿ:ಶಿರಾಳಕೊಪ್ಪದಲ್ಲಿ ‘ಖೇತ್ ಬಚಾವೊ’ಅಭಿಯಾನದಡಿತರಬೇತಿ…

The Siasat News - Images

ಶಿರಾಳಕೊಪ್ಪ : 14/6/2026

ರೈತರ ಆರ್ಥಿಕ ಸಬಲೀಕರಣ ಮತ್ತು ಸುಸ್ಥಿರ ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಶಿರಾಳಕೊಪ್ಪದ ರೈತ ಸಂಪರ್ಕ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಖೇತ್ ಬಚಾವೊ’ (ಕೃಷಿ ಭೂಮಿ ಉಳಿಸಿ) ಅಭಿಯಾನದಡಿ ರೈತರಿಗೆ ವಿಶೇಷ ತರಬೇತಿ ಹಾಗೂ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.

ಇತ್ತೀಚಿನ ದಿನಗಳಲ್ಲಿ ಕೃಷಿ ಭೂಮಿಯ ಫಲವತ್ತತೆ ಕುಸಿಯುತ್ತಿರುವುದು ಮತ್ತು ಹವಾಮಾನ ವೈಪರೀತ್ಯದಿಂದ ಎದುರಾಗುತ್ತಿರುವ ಸವಾಲುಗಳನ್ನು ಎದುರಿಸಲು ರೈತರನ್ನು ಸಜ್ಜುಗೊಳಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿತ್ತು.

The Siasat News - Images

ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ತೋಟಗಾರಿಕೆ ವಿಭಾಗದ ಕೃಷಿ ತಜ್ಞರಾದ ಡಾ. ರೇಖಾ ಅವರು ಮಾತನಾಡಿ, ರಾಸಾಯನಿಕ ಗೊಬ್ಬರಗಳ ಅಸಮತೋಲನ ಹಾಗೂ ಅತಿಯಾದ ಬಳಕೆಯಿಂದ ಮಣ್ಣಿನ ಸವೆತ ಉಂಟಾಗುತ್ತಿದೆ. ಮಣ್ಣಿನಲ್ಲಿ ಸಾವಯವ ಇಂಗಾಲದ ಕೊರತೆ, ಪೋಷಕಾಂಶಗಳ ಅಸಮತೋಲನ ಮತ್ತು ಜಲ ಮಾಲಿನ್ಯದಂತಹ ವ್ಯಾಪಕ ಸಮಸ್ಯೆಗಳು ಎದುರಾಗುತ್ತಿವೆ. ಇದರಿಂದಾಗಿ ಮಣ್ಣಿನಲ್ಲಿರುವ ಉಪಕಾರಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಕ್ಷೀಣಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಮಣ್ಣಿನ ಆರೋಗ್ಯ ಕಾಪಾಡಲು ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ, ಹೆಚ್ಚು ಸಾವಯವ ಹಾಗೂ ಕೊಳೆತ ಕಂಪೋಸ್ಟ್ ಗೊಬ್ಬರಗಳನ್ನು ಬಳಸುವಂತೆ ಅವರು ರೈತರಿಗೆ ಕಿವಿಮಾತು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರ ಸಸ್ಯ ಸಂರಕ್ಷಣಾ ವಿಭಾಗದ ಡಾಕ್ಟರ್ ಗಿರೀಶ್ ಮಾತನಾಡಿ ಜೀವಾಮೃತ ಬೀಜಾಮೃತ ಹಾಗೂ ಕೊಟ್ಟಿಗೆ ಗೊಬ್ಬರದ ಬಳಕೆಯಲ್ಲಿ ಟ್ರೈಕೊಡರ್ಮ, ಸುಡೋಮೌನ,ಕಂಪೋಸ್ಟ್ ಗೊಬ್ಬರ ಗಳ ಜೊತೆ ಮಿಶ್ರಣ ಮಾಡಿ ತಮ್ಮ ಜಮೀನುಗಳಲ್ಲಿ ಅಳವಡಿಸಿಕೊಳ್ಳಬೇಕು, ಮಣ್ಣಿನಲ್ಲಿ ಆಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ಕರ್ತವ್ಯವನ್ನು ನಾವೆಲ್ಲರೂ ಕೈಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳಾದ ಹಂಪಣ್ಣ.ವಿ, ರೈತ ಮುಖಂಡ ಬಸವನಗೌಡ, ರೇವಣಪ್ಪ ಮುತ್ತಗಿ, ಗ್ರಾಮ ಆತ್ಮ ಯೋಜನೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಮತೀನ್ ಖಾನ್, ಹಾಗೂ ಕೃಷಿ ಇಲಾಖೆಯ ಸಿಬ್ಬಂದಿ ವರ್ಗ ಸೇರಿದಂತೆ ಅನೇಕ ಸ್ಥಳೀಯ ಕೃಷಿಕರು,ಅನ್ನದಾತರು ಇದ್ದರು.

ವರದಿ:ನವೀದ್ ಶಿರಾಳಕೊಪ್ಪ 9538633929

Share the news!

Leave a Reply

Your email address will not be published. Required fields are marked *