ಶಿಕಾರಿಪುರ :23/3/2026
ರಾಜ್ಯ ಸರ್ಕಾರದಿಂದ ನೂತನವಾಗಿ ಜಾರಿಗೆ ಬಂದಂತಹ ಜಾಹೀರಾತು ನೀತಿ 2026 ದಿಂದಾಗಿ ಸಣ್ಣ ಮತ್ತು ಮಧ್ಯಮ ಪತ್ರಿಕೆ ಗಳು ತಮ್ಮ ಅಸ್ತಿತ್ವನ್ನೇ ಕಳೆದು ಕೊಳ್ಳುವ ಗಂಭೀರ ಅಪಾಯ ಎದುರಾಗಲಿದೆ. ಆದುದರಿಂದ ಸರ್ಕಾರ ನೂತನ ಜಾರಿ ಮಾಡಿದ ನೀತಿಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಿ ವ್ಯಾಪಕ ಚರ್ಚೆ ಹಾಗೂ ಸಾಧ್ಯವಾದ ನೀತಿಯ ಮೂಲಕ ಮರು ನಿರೋಪಣೆ ಮಾಡಬೇಕೆಂದು ಆಗ್ರಹಿಸಿ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ರವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಘದ ಜಿಲ್ಲಾ ಉಪಾಧ್ಯಕ್ಷ ಕೆ ಎಸ್ ಹುಚ್ಚರಾಯಪ್ಪ ಜಾಹೀರಾತು ನೀತಿ 2026ರಲ್ಲಿ ಕೆಲವು ಅಂಶಗಳ ಬಗೆಗೆ ಸ್ಪಷ್ಟತೆ ಇಲ್ಲದೆ ಇರುವುದರಿಂದ ಹಾಗೂ ವಾಸ್ತವತೆಗೆ ಹೊಂದಿಕೆಯಾಗದೆ ಇರುವುದರಿಂದ ಈ ನೀತಿಯು ಪತ್ರಕರ್ತರಿಗೆ ಹೊರಲಾರದ ಆರ್ಥಿಕ ಹೊರೆಯಾಗಲಿದೆ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪಾಲಿಗೆ ಮರಣ ಶಾಸನದಂತಿರುವ ನೂತನ ಜಾಹೀರಾತು ನೀತಿಯನ್ನು ಸರಕಾರ ತಕ್ಷಿಣ ನಿಲ್ಲಿಸಿ ಮರು ಪರಿಶೀಲಿಸುವಂತೆ ಆಗ್ರಹಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಎಂ ನವೀನ್ ಕುಮಾರ್ ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆನಿಸಿರುವ ಪತ್ರಿಕಾ ರಂಗವನ್ನು ಆರೋಗ್ಯಕರವಾಗಿ ಉಳಿಸಲು ಸರ್ಕಾರದ ಸಹಕಾರ, ಮಾರ್ಗದರ್ಶನ ಹಾಗೂ ಪ್ರೋತ್ಸಾಹದ ಅಗತ್ಯತೆ ಮುಖ್ಯ. ಸಣ್ಣ ಪತ್ರಿಕೆಗಳು ಮತ್ತು ಸ್ಥಳೀಯ ಮಾಧ್ಯಮಗಳು ತಮ್ಮ ದೈನಂದಿನ ಕಾರ್ಯ ಚಟುವಟಿಕೆಗಳನ್ನು ಮುಂದುವರಿಸಲು ಈಗಾಗಲೇ ಸಾಕಷ್ಟು ಕಷ್ಟ ಪಡುತ್ತಿರುವುದು ಗಮನಿಸಬೇಕಾದ ಸಂಗತಿಯಾಗಿದ್ದು ಇದರೊಂದಿಗೆ ನೂತನ ಜಾಹಿರಾತು ನೀತಿಯು ನಿರ್ವಹಿಸಲು ಅಸಾಧ್ಯವೆನಿಸುವಷ್ಟು ಅಡಚಣೆಗಳನ್ನು, ಅಡೆತಡೆಗಳನ್ನು ತಂದೊಡ್ಡಲಿದೆ. ಆದುದರಿಂದ ಅನುಮೋದನೆ ಗೊಂಡ ನೂತನ ಜಾಹೀರಾತು ನೀತಿಯ ಬಗ್ಗೆ ಗಂಭೀರವಾಗಿ ಆಲೋಚಿಸುವ ಮತ್ತು ಚರ್ಚಿಸುವ ಅವಶ್ಯಕತೆ ಇದೆ ಎಂದರು.
ಪ್ರತಿಭಟನೆಯ ನಂತರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಪ್ರತಿಭಟನೆಯಲ್ಲಿ ಕಾರ್ಯ ನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಠದ, ಪ್ರಕಾಶ್ ಕೆಎಂ , ಖಜಾಂಚಿ ಭಗನ ಕಟ್ಟೆ ಮಂಜಪ್ಪ, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಈ ಹೆಚ್ ಬಸವರಾಜು,ನಿಕಟ ಪೂರ್ವ ಅಧ್ಯಕ್ಷ ಬಿ.ಎಲ್ ರಾಜು, ಬಾಲ ಕೃಷ್ಣ ಜೋಯ್ಸ್, ಜಿಲ್ಲಾ ಸಂಘದ ನಿರ್ದೇಶಕರಾದ ರಾಜಾರಾವ್ ಜಾದವ್ , ಅರುಣ್ ಕುಮಾರ್ , ರಮ್ಯಾ ಸತೀಶ್, ಪಿ ಕಾಳಿಂಗರಾವ್ , ಜಿ ಕೆ ಹೆಬ್ಬಾರ್, ಕೋಟೇಶ್ವರ ಮುಂತಾದವರು ಉಪಸ್ಥಿತರಿದ್ದರು.
ವರದಿ:ನವೀದ್ ಶಿರಾಳಕೊಪ್ಪ

