ಎಂಐಒ ತೀರ್ಥಹಳ್ಳಿಯಲ್ಲಿ 81 ವರ್ಷದ ವೃದ್ಧೆಯ 6 ಕೆಜಿ ಅಂಡಾಶಯ ಗಡ್ಡೆಯನ್ನು ಯಶಸ್ವಿಯಾಗಿ ತೆರವು…

The Siasat News - Images

ತೀರ್ಥಹಳ್ಳಿ:15/2/2026

ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಆಂಕಾಲಜಿ (MIO) ತೀರ್ಥಹಳ್ಳಿ ಕೇಂದ್ರದಲ್ಲಿ 81 ವರ್ಷದ ವೃದ್ಧೆಯೊಬ್ಬರ 40 ಸೆಂ.ಮೀ ಗಾತ್ರದ ಸುಮಾರು 6 ಕೆಜಿ ತೂಕದ ಭಾರೀ ಅಂಡಾಶಯ ಗಡ್ಡೆಯನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮೂಲಕ ತೆರವುಗೊಳಿಸಲಾಗಿದೆ.

ಹೃದಯ ಸಂಬಂಧಿತ ಸಮಸ್ಯೆ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಈ ವೃದ್ಧೆ ಹೆಚ್ಚಿನ ಅಪಾಯದ ರೋಗಿಯಾಗಿದ್ದರೂ, ಸಮಗ್ರ ವೈದ್ಯಕೀಯ ತಯಾರಿ ಮತ್ತು ತಜ್ಞರ ತಂಡದ ಸಮನ್ವಯದಿಂದ ಸಂಕೀರ್ಣ ಸ್ಟೇಜಿಂಗ್ ಲ್ಯಾಪರೋಟಮಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಯಿತು.

ಈ ಶಸ್ತ್ರಚಿಕಿತ್ಸೆಯನ್ನು ಮುಖ್ಯ ಶಸ್ತ್ರಚಿಕಿತ್ಸಕ ಡಾ. ಸುರೇಶ್ ಕ್ಲೆಮೆಂಟ್ ಡಿ’ಸೌಜಾ ಅವರ ನೇತೃತ್ವದಲ್ಲಿ ಡಾ. ದಿವ್ಯ ಜ್ಯೋತಿ ಅವರೊಂದಿಗೆ ನಡೆಸಲಾಯಿತು.

ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆ ನೀಡಲಾಗಿದ್ದು, ರೋಗಿಯ ಕುಟುಂಬಕ್ಕೆ ಯಾವುದೇ ಆರ್ಥಿಕ ಭಾರವಾಗಿಲ್ಲ. ಶಸ್ತ್ರಚಿಕಿತ್ಸೆಯ ನಂತರ ರೋಗಿ ಚೇತರಿಸಿಕೊಳ್ಳುತ್ತಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ತೀರ್ಥಹಳ್ಳಿಯ ಆಂಕಾಲಜಿ ತಂಡದ ಮುಖ್ಯಸ್ಥರಾದ ಡಾ. ಸುರೇಶ್ ರಾವ್ ಅವರು ಮಾತನಾಡಿ, “ಈ ದೊಡ್ಡ ಶಸ್ತ್ರಚಿಕಿತ್ಸೆ ತೀರ್ಥಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿಯೂ ಉನ್ನತ ಮಟ್ಟದ, ಪ್ರೋಟೋಕಾಲ್ ಆಧಾರಿತ ಕ್ಯಾನ್ಸರ್ ಚಿಕಿತ್ಸೆ ನೀಡಲು ಸಾಧ್ಯವೆಂಬುದನ್ನು ಸಾಬೀತುಪಡಿಸಿದೆ. ನಗರ ಮಟ್ಟದ ಚಿಕಿತ್ಸೆ ಈಗ ಗ್ರಾಮೀಣ ಪ್ರದೇಶಗಳಿಗೂ ತಲುಪುತ್ತಿದೆ,” ಎಂದು ಹರ್ಷ ವ್ಯಕ್ತ ಪಡಿಸಿದರು

ಗ್ರಾಮೀಣ ಭಾಗದಲ್ಲಿ ಉತ್ತಮ ಗುಣಮಟ್ಟದ ಕ್ಯಾನ್ಸರ್ ಚಿಕಿತ್ಸೆ ಒದಗಿಸುವತ್ತ MIO ತೀರ್ಥಹಳ್ಳಿ ಕೇಂದ್ರ ಮಹತ್ವದ ಹೆಜ್ಜೆ ಇಟ್ಟಿದೆ ಎಂಬುದು ಈ ಯಶಸ್ವಿ ಶಸ್ತ್ರಚಿಕಿತ್ಸೆಯಿಂದ ಸ್ಪಷ್ಟವಾಗಿದೆ.

ವರದಿ:ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *