ಗುರು ಪರಂಪರೆ ಶಾಶ್ವತ :ಶಿರಹಟ್ಟಿ ಶ್ರೀ ಜಗದ್ಗುರು ಫಕೀರ ದಿಂಗಾಲೇಶ್ವರ ಸ್ವಾಮಿಗಳು…

The Siasat News - Images

ಶಿರಾಳಕೊಪ್ಪ :21/01/2026

ದೇಶದಲ್ಲಿ ಹಲವಾರು ರಾಜ ಪರಂಪರೆಗಳು ಆಳಿದರು-ಅಳಿದೂ ಹೋದರು. ಆದರೆ ಗುರು ಪರಂಪರೆಗಳು ಉಳಿದು ಬೆಳೆದುಕೊಂಡು ಬಂದಿವೆ. ಯಾವುದೇ ಕಾಲಕ್ಕೂ ಮಠಗಳಿಗೆ ಗುರು ಪರಂಪರೆಗಳಿಗೆ ಅಳಿವು ಎಂಬುದು ಇಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕೆಂದು ಶಿರಹಟ್ಟಿ ಶ್ರೀ ಜಗದ್ಗುರು ಫಕೀರೇಶ್ವರ ಭಾವೈಕ್ಯತಾ ಸಂಸ್ಥಾನಮಠದ ಶ್ರೀ ಮನ್ ಮಹಾರಾಜ ನಿರಂಜನ ಜಗದ್ಗುರು ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳು ನುಡಿದರು.

ಅವರು ಮಂಗಳವಾರ ಶಿಕಾರಿಪುರ ತಾಲೂಕ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಪರಂಪರೆ ಜಾತ್ರೋತ್ಸವ, ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ, 9 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯ ಹರಕೆ ರಥದ ಉದ್ಘಾಟನೆ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

The Siasat News - Images

ಸೊಶಿಯಲ್ ಮೀಡಿಯಾದಲ್ಲಿ ನಾವು ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯರ ಪೂಜೆಯನ್ನು ಅತ್ಯಂತ ಪ್ರೀತಿಯಿಂದ ನೋಡುತ್ತೇವೆ. ಅವರ ಕ್ರಿಯಾಶೀಲತೆಗೆ ಈ ಮಠದ ಕಟ್ಟಡ ಸಾಕ್ಷಿಯಾಗಿದೆ. ಸ್ವಾಮಿಗಳಾದವರು ಎಲ್ಲ ವಿದ್ಯೆಗಳಲ್ಲಿ ಪ್ರಾವಿಣ್ಯ ಹೊಂದಿರಬೇಕಾಗುತ್ತದೆ. ಕಡೇನಂದಿಹಳ್ಳಿ ಶ್ರೀಗಳವರು ಎಲ್ಲ ರಂಗಗಳ ಸಾಧಕರನ್ನು ಗುರುತಿಸಿ ಗೌರವಿಸಿರುವುದು ದೊಡ್ಡ ಕೆಲಸವಾಗಿದೆ. ಭಕ್ತರು ತಮ್ಮ ಮನಸ್ಸಿನಲ್ಲಿರುವ ಶಕ್ತಿಯನ್ನು ಭಕ್ತಿ ರೂಪದಲ್ಲಿ ಬಳಕೆ ಮಾಡಿದಾಗ ಒಳ್ಳೆಯದಾಗುತ್ತದೆ ಎಂದರು.

ಸಮಾರಂಭವನ್ನು ಉದ್ಘಾಟಿಸಿದ ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ ತಾಯಂದಿರು ಮಕ್ಕಳನ್ನು ವಿದ್ಯೆಯ ಜೊತೆಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು. ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳವರ ಎಲ್ಲ ಸಾತ್ವಿಕ ಕಾರ್ಯಗಳಿಗೆ ನಾವೆಲ್ಲರೂ ಬೆನ್ನೆಲುಬಾಗಿ ನಿಲ್ಲೋಣ ಎಂದರು.

The Siasat News - Images

ಪ್ರಶಸ್ತಿ ಪ್ರದಾನ: ಈ ವರ್ಷದ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿಯನ್ನು ಶಿಕಾರಿಪುರ ತಾಲೂಕ ಈಸೂರು ಗ್ರಾಮದ ಬಸವಾರಾಧ್ಯ ಸಾಹುಕಾರ್ ಅವರಿಗೆ ಪ್ರದಾನ ಮಾಡಲಾಯಿತು.

ನೇತೃತ್ವ ವಹಿಸಿದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ಕಳೆದ 12 ವರುಷಗಳಲ್ಲಿ ಶ್ರೀ ಮಠದಲ್ಲಿ ಆಗಿರುವ ಎಲ್ಲ ಬೆಳವಣಿಗೆಗೆ ಶ್ರೀಮದ್ ರಂಭಾಪುರಿ ಜಗದ್ಗುರು ಮಹಾಸನ್ನಿಧಿಯವರು ಸೇರಿದಂತೆ ಎಲ್ಲ ಹಿರಿಯರ ಆಶೀರ್ವಾದ, ಶ್ರೀ ಮಳೆಮಲ್ಲೇಶ್ವರ ಸ್ವಾಮಿಯ ಕೃಪೆ ಹಾಗೂ ಭಕ್ತರ ಉದಾರ ಹಸ್ತದ ಸಹಕಾರ ಕಾರಣವಾಗಿದೆ. ಸಂಸದರಿಂದ ಸಾಮಾನ್ಯ ಭಕ್ತರ ವರೆಗೆ ಎಲ್ಲರೂ ತಮ್ಮ ಸಹಾಯ ಸಹಕಾರ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಗತಿಗಾಗಿ ನಾವೆಲ್ಲರೂ ಶ್ರಮಿಸೋಣ ಎಂದರು.

ಮುಖ್ಯ ಅತಿಥಿಗಳಾಗಿ ವಿ.ಪ.ಸದಸ್ಯರಾದ ಶ್ರೀಮತಿ ಭಾರತಿ ಶೆಟ್ಟಿ, ಬಿಜೆಪಿ ಮುಖಂಡ ಕೆ.ಎಸ್.ಗುರುಮೂರ್ತಿ, ಕಡೇನಂದಿಹಳ್ಳಿ ಬಸವರಾಜಪ್ಪ ಚನ್ನಳ್ಳೇರ, ಲಿಂಗರಾಜ ಸಿ.ಬಿ., ಸುದರ್ಶನ ಹೆಚ್, ಅರುಣಕುಮಾರ್ ಎಂ., ಮಹಾಲಿಂಗಯ್ಯ ಶಾಸ್ತಿç, ದಿನೇಶ್ ಎಂ. ಪ್ರಶಾಂತಕುಮಾರ್ ಟಿ.ಬಿ., ಮಂಜಪ್ಪ ಹೆಚ್., ಸತೀಶಶೆಟ್ರು ಪತ್ರಿಕೊನಿ, ಮಂಜುನಾಥ ಎಂ.ಆರ್., ದೇವೇಂದ್ರಪ್ಪ ಪಿ.ಎಸ್. ಮೊದಲಾದ ಗಣ್ಯರು ಭಾಗವಹಿಸಿದ್ದರು. ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಉಪಸ್ಥಿತರಿದ್ದರು. ತೊಗರ್ಸಿ ಮಹಾಂತ ದೇಶಿಕೇಂದ್ರ ಶಿವಾಚಾರ್ಯರು, ಕನ್ನೂರು-ಸಿಂಧನೂರು ಸೋಮನಾಥ ಶಿವಾಚಾರ್ಯರು, ಅರಸೀಕೆರೆ ಶಾಂತಲಿಂಗ ದೇಶಿಕೇಂದ್ರ ಸ್ವಾಮಿಗಳು, ಕಾರ್ಜುವಳ್ಳಿ ಸದಾಶಿವ ಶಿವಾಚಾರ್ಯರು, ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯರು, ನಾಗಂದ ಶಿವಯೋಗಿ ಶಿವಾನಂದ ಶಿವಾಚಾರ್ಯರು, ಚನ್ನಗಿರಿ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯರು, ಗೋವಿನಕೋವಿ ಶಿವಯೋಗಿ ವಿಶ್ವಾರಾಧ್ಯ ಮಹಾಲಿಂಗ ಸ್ವಾಮಿಗಳು, ಗುಳಗುಳಿ ಋಷಿಕುಮಾರ ಸ್ವಾಮಿಗಳು, ರಾಂಪುರದ ಶಿವಯೋಗಿ ಶಿವಕುಮಾರ ಹಾಲಸ್ವಾಮಿಗಳು, ಲಿಂಗಸುಗೂರು ನಂದಿಕೇಶ್ವರಿ ಅಮ್ಮನವರು. ಅರಕೆರೆ ಶ್ರೀಗಳು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಡೇನಂದಿಹಳ್ಳಿ ಶ್ವೇತಾ ಕೆ.ಎಚ್. ಪ್ರಾರ್ಥನೆ ಸಲ್ಲಿಸಿದರು. ಬಿಸಲಹಳ್ಳಿಯ ಮಧುರಾ ಡಿ.ಕೆ. ಇವರಿಂದ ಭರತನಾಟ್ಯ ಜರುಗಿತು. ಹಿರೇಕೆರೂರಿನ ವೇ. ಚನ್ನೇಶ ಶಾಸ್ತಿçಗಳು ಸರ್ವರನ್ನು ಸ್ವಾಗತಿಸಿದರು. ಸವಣೂರಿನ ಡಾ.ಗುರುಪಾದಯ್ಯ ವೀ.ಸಾಲಿಮಠ ನಿರೂಪಿಸಿದರು. ಶಿಕಾರಿಪುರದ ದೇವೇಂದ್ರಪ್ಪ ಪಿ.ಎಸ್. ವಂದಿಸಿದರು. ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ, ಕ್ಷೇತ್ರನಾಥ ಶ್ರೀ ಮಳೆಮಲ್ಲೇಶ್ವರಸ್ವಾಮಿಗೆ ಹಾಗೂ ಪರಿವಾರ ದೇವತೆಗಳಿಗೆ ಮಹಾರುದ್ರಾಭಿಷೇಕ, ಶಿವಾಷ್ಟೋತ್ತರ, ವಿಶೇಷ ಅಲಂಕಾರಯುಕ್ತ ಪೂಜೆ, ಮಹಾಮಂಗಳಾರತಿ ನಡೆದವು. ಮಧ್ಯಾಹ್ನ ಲೋಕಕಲ್ಯಾಣಾರ್ಥವಾಗಿ ಭಕ್ತರ ಕ್ಷೇಮಾಭಿವೃದ್ಧಿಗಾಗಿ ಶ್ರೀ ಶೂಲಿನಿ ಮಹಾ ಪ್ರತ್ಯಂಗಿರಾ ಸಹಿತ ಶರಭೇಶ್ವರ ಹೋಮ ಮಹಾ ಪೂರ್ಣಾಹುತಿ ಜರುಗಿತು. ಇದೇ ಸಂದರ್ಭದಲ್ಲಿ ನೂತನ ರಥದ ಲೋಕಾರ್ಪಣೆಯೂ ನಡೆಯಿತು.

ವರದಿ:ನವೀದ್ ಶಿರಾಳಕೊಪ್ಪ 9538633929

Share the news!

Leave a Reply

Your email address will not be published. Required fields are marked *