ಶಿರಾಳಕೊಪ್ಪ:30/12/2025
ಸಮಾಜದಲ್ಲಿ ಒಗ್ಗಟ್ಟು, ಪರಸ್ಪರ ಪ್ರೀತಿ ಹಾಗೂ ವಿಶ್ವಾಸ ಅತ್ಯಂತ ಅಗತ್ಯವಾಗಿದ್ದು, ಹಿರಿಯರನ್ನು ಗೌರವಿಸುವ ಸಂಸ್ಕಾರ ಮುಂದಿನ ತಲೆಮಾರಿಗೆ ವರ್ಗಾವಣೆಯಾಗಬೇಕು ಎಂದು ಶ್ರೀ ಶ್ರೀ ಸುಜ್ಞಾನೇಶ್ವರ ಭಾರತಿ ಸ್ವಾಮೀಜಿಗಳು ಹೇಳಿದರು.
ಪಟ್ಟಣದ ಸಮೀಪ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ದೇವರು ಮತ್ತು ಧರ್ಮದ ಬಗ್ಗೆ ಭಕ್ತಿ ಹಾಗೂ ಶ್ರದ್ಧೆ ಇರಬೇಕು ಕರ್ಕಿಯಲ್ಲಿರುವ ದೈವಜ್ಞರ ಮಠ ಹಾಗೂ ಜ್ಞಾನೇಶ್ವರಿ ದೇವಸ್ಥಾನಕ್ಕೆ ವರ್ಷಕ್ಕೆ ಕನಿಷ್ಠ ಒಮ್ಮೆ ಯಾದರೂ ಭಕ್ತರು ಭೇಟಿ ನೀಡಬೇಕು ಎಂದು ಕರೆ ನೀಡಿದರು.
ಇಂದು ಭಕ್ತರು ತೋರಿದ ಭಕ್ತಿ ಪೂರ್ವಕ ಸ್ವಾಗತದಿಂದ ಮನಸ್ಸು ತುಂಬಿ ಬಂದಿದೆ ಎಂದು ಹೇಳಿದ ಅವರು ಮಾತನಾಡುತ್ತ,“ಸರ್ವೇ ಜನಾಃ ಸುಖಿನೋ ಭವಂತು ಎಂಬ ತತ್ತ್ವವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ, ಸಹಬಾಳ್ವೆ ಮತ್ತು ಸಹಾನುಭೂತಿ ನೆಲೆಸಬೇಕು” ಎಂದು ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಮಹಾಸ್ವಾಮೀಜಿಗಳು ಮಾತನಾಡಿ,“ಎಲ್ಲ ಭಕ್ತರು ಸದಾ ಮಠಕ್ಕೆ ಬಂದು ದರ್ಶನ ಪಡೆಯುವುದು ಸಾಧ್ಯವಿಲ್ಲ. ಆದ್ದರಿಂದ ನಾವೇ ಭಕ್ತರ ಬಳಿಗೆ ಬಂದು ಆಶೀರ್ವಚನ ನೀಡುತ್ತಿದ್ದೇವೆ. ಅರಿಷಡ್ವರ್ಗಗಳಿಂದ ದೂರವಿದ್ದು, ಸದುಪಾಯ ಜೀವನ ನಡೆಸಬೇಕು. ಮಕ್ಕಳಿಗೆ ಸನ್ಮಾರ್ಗ ತೋರಿಸುವ ಹೊಣೆ ಹಿರಿಯರ ಮೇಲಿದೆ. ಜಾತಿ ಭೇದ ಮರೆತು, ನಾವು ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಬೇಕು” ಎಂದರು.
ಇದೇ ವೇಳೆ, 2011, 2019 ಹಾಗೂ 2025ರಲ್ಲಿ ಶಿರಾಳಕೊಪ್ಪಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಭಕ್ತರು ತೋರಿದ ಆತ್ಮೀಯತೆ ಸದಾ ಸ್ಮರಣೀಯವಾಗಿದ್ದು, ಈ ಬಾರಿ ಕೂಡ ಭಕ್ತರ ಅಪಾರ ಪ್ರೀತಿ ಸಂತೋಷ ತಂದಿದೆ ಎಂದು ತಿಳಿಸಿದರು.ಎಲ್ಲರಿಗೂ ತಾಯಿ ಜ್ಞಾನೇಶ್ವರಿ ಆಯುರಾರೋಗ್ಯ, ಐಶ್ವರ್ಯ ಮತ್ತು ಶಾಂತಿ ನೀಡಲಿ ಎಂದು ಅವರು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಂಕರ್ ಬಾಬು, ಕಾರ್ಯದರ್ಶಿ ಎಂ ಆರ್ ರಾಘವೇಂದ್ರ, ಉಪಾಧ್ಯಕ್ಷ ವಿಷ್ಣು ರಾಯ್ಕರ್ ಉಪಸ್ಥಿತರಿದ್ದರು. ಪಾಂಡುರಂಗ ಜನ್ನು ಮತ್ತು ಈಶ್ವರ್ ಡಿ ಮತ್ತು ಕುಟುಂಬ ಪಾದಪೂಜೆ ನೆರವೇರಿಸಿತು.

