ಶಿರಾಳಕೊಪ್ಪ:30/12/2025
ಮಕ್ಕಳು ಸರಿದಾರಿಯಲ್ಲಿ ಬೆಳೆಯಬೇಕಾದರೆ ಮೊದಲು ತಂದೆ–ತಾಯಿಗಳು ಸರಿಯಾದ ದಾರಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳು ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನೂ ಪಡೆದುಕೊಳ್ಳಲು ಸಾಧ್ಯ ಎಂದು ಬಿಗ್ಬಾಸ್ ಖ್ಯಾತಿಯ ನಟ ತ್ರಿವಿಕ್ರಮ್ ಹೇಳಿದರು.

ಪಟ್ಟಣದ ವೈಭವ ಫ್ರೀ ಯುನಿವರ್ಸಿಟಿ ಕಾಲೇಜು ಹಾಗೂ ರೆಸಿಡೆನ್ಷಿಯಲ್ ಸ್ಕೂಲ್ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ತಂತ್ರಜ್ಞಾನಯುಗದಲ್ಲಿ ಸಮಾಜದ ಪ್ರತಿಯೊಬ್ಬರಿಗೂ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದೆ ಎಂದರು.ಗ್ರಾಮೀಣ ಪ್ರದೇಶವಾದ ಶಿರಾಳಕೊಪ್ಪದಲ್ಲಿಯೇ ಇಂತಹ ಅತ್ಯುತ್ತಮ ಶಿಕ್ಷಣ ಸಂಸ್ಥೆ ಸ್ಥಾಪನೆಯಾಗಿರುವುದು ಶ್ಲಾಘನೀಯವಾಗಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, “ಇಂದಿನ ದಿನಗಳಲ್ಲಿ ಸುಸಜ್ಜಿತ ಶಿಕ್ಷಣ ಸಂಸ್ಥೆಗಳು ಲಭ್ಯವಿರುವುದರಿಂದ ವಿದ್ಯಾಭ್ಯಾಸಕ್ಕಾಗಿ ದೂರದ ನಗರಗಳಿಗೆ ತೆರಳುವ ಅವಶ್ಯಕತೆ ಕಡಿಮೆಯಾಗಿದೆ. ಹಿಂದೆ ಡಿಗ್ರಿ ಶಿಕ್ಷಣಕ್ಕಾಗಿ ಬೆಂಗಳೂರು ಮುಂತಾದ ನಗರಗಳಿಗೆ

ಹೋಗಬೇಕಾಗುತ್ತಿತ್ತು. ಈಗ ಶಿವಮೊಗ್ಗದಲ್ಲೇ ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಶಿಕ್ಷಣ ಪಡೆಯುವ ಅವಕಾಶಗಳಿವೆ. ವಿದ್ಯಾರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಸಂಸ್ಕಾರಯುತ ಶಿಕ್ಷಣ ಪಡೆಯಬೇಕು” ಎಂದರು.
ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಹೆಚ್. ಹುಚ್ಚರಾಯಪ್ಪ ಮಾತನಾಡಿ, “ವಿದ್ಯೆ ಎಷ್ಟು ಮುಖ್ಯವೋ ಅಷ್ಟೇ ಸಂಸ್ಕಾರವೂ ಅಗತ್ಯ. ಇಂದು ಕೆಲವೆಡೆ ವಿದ್ಯಾವಂತರಾಗಿಯೂ ತಮ್ಮ ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ಕಳುಹಿಸುವುದು ನೋವಿನ ಸಂಗತಿ. ಇಂತಹ ಪರಿಸ್ಥಿತಿ ಬರದಂತೆ ಮಕ್ಕಳಲ್ಲಿ ಮೌಲ್ಯಾಧಾರಿತ ಶಿಕ್ಷಣ ಬೆಳೆಸುವುದು ಅಗತ್ಯ. ಈ ನಿಟ್ಟಿನಲ್ಲಿ ವೈಭವ ವಿದ್ಯಾಸಂಸ್ಥೆಯ ಸಂಸ್ಥಾಪಕ ಶಿವಣ್ಣ ಹಾಗೂ ಅವರ ಕುಟುಂಬದ ಶ್ರಮ ಶ್ಲಾಘನೀಯ” ಎಂದು ಹೇಳಿದರು.
ಶಾಲಾ ಮಕ್ಕಳಿಂದ ಪ್ರತಿ ವರ್ಷ ಸಿದ್ಧಪಡಿಸಲಾಗುವ ಜ್ಞಾನ ಕಳಶ ಎಂಬ ವಾರ್ಷಿಕ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ವೈಭವ ವಿದ್ಯಾಸಂಸ್ಥೆಯ ಸಂಸ್ಥಾಪಕ ಶಿವಣ್ಣ, ಪ್ರಾಂಶುಪಾಲೆ ರೂಪಾ ಶಿವಣ್ಣ, ಡಾ. ಪ್ರಸಾದ್, ಡಾ. ಮೌಲ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.

