ಶಿರಾಳಕೊಪ್ಪ:11-10-2025
ಪಟ್ಟಣದ ಸಣ್ಣ ಬ್ಯಾಂಡ್ ಕೇರಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮದ್ರಸ ಖಾದರಿಯ ದಾರುಲ್ ಉಲೂಮ್ ಮದ್ರಸದ ಉದ್ಘಾಟನೆ ಹಾಗೂ ಪ್ರವೇಶೋತ್ಸವ ಕಾರ್ಯಕ್ರಮ ಶುಕ್ರವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮದ್ರಸಾದ ಗುರುಗಳು ಹಾಗೂ ಸ್ಥಳೀಯ ಹಜರತ್ ಬಿಲಾಲ್ ಮಸೀದಿಯ ಖತೀಬ್ ಮೌಲಾನ ರಾಹತ್ ಅಲಿ “ವಿದ್ಯಾರ್ಥಿಗಳಿಗೆ ಮದ್ರಸಾ ಶಿಕ್ಷಣವು ಅವರ ನೈತಿಕ ಜೀವನಕ್ಕೆ ಭದ್ರ ಬುನಾದಿ ಮಾತ್ರವಲ್ಲದೆ ಗುರುಹಿರಿಯರನ್ನು ಗೌರವದಿಂದ ನೋಡಿಕೊಳ್ಳುವ ಪರಿಪಾಠವನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ” ಎಂದರು.
ಮುಖ್ಯ ಅತಿಥಿಗಳಾಗಿ ಬೆಂಗಳೂರಿನಿಂದ ಆಗಮಿಸಿದ ಹಿರಿಯ ಧರ್ಮ ಗುರುಗಳಾದ ಮೌಲಾನ ಸಾಜಿದ್ ರಜಾ ಮಾತನಾಡಿ ಪ್ರವಾದಿ ಮುಹಮ್ಮದ್ ರವರು ಈ ಭೂಮಿಯ ಮೇಲೆ ಶಾಂತಿ ದೂತರಾಗಿ ಆಗಮಿಸಿದ್ದು ನಾವೆಲ್ಲರೋ ಅವರು ಹಾಕಿ ಕೊಟ್ಟ ಮಾರ್ಗದಲ್ಲಿ

ಜೀವನ ನಡೆಸಬೇಕು. ಮದುವೆ ಮತ್ಯಾದಿ ಸಭೆ ಸಭಾರಂಭ ಗಳನ್ನು ಸರಳವಾಗಿ ಮಾಡಿ ಬಡವರನ್ನು ಹೊರೆ ಮಾಡದಂತೆ ಶಿಕ್ಷಣವನ್ನು ಪ್ರವಾದಿಯವರು ನೀಡಿದ್ದಾರೆ ಆದರೆ ಇತ್ತೀಚಿಗೆ ಇಂತಹ ಕಾರ್ಯಕ್ರಮಗಳಲ್ಲಿ ಪಾಶ್ಚಾ ತ್ಯ ದೇಶಗಳ ಸಂಸ್ಕೃತಿ ಅನುಸರಿಸುತ್ತಿರುವುದು ವಿಷಾದನೀಯ ಸಂಗತಿ ಎಂದರು.
ಮದ್ರಸಾದ ಕಟ್ಟಡ ನಿರ್ಮಾಣ ಕಮಿಟಿಯ ಸದಸ್ಯರಾದ ಕೆ ಜಿ ಎನ್ ರಫೀಕ್, ಇಬ್ರಾಹಿಮ್ ಸೀ. ಎಂ, ಸಾದಿಕ್, ಮುಕ್ತಿಯಾರ್ ಮತ್ತು ಸ್ಥಳೀಯ ಎಲ್ಲಾ ಮಸೀದಿಗಳ ಮೌಲಾನಾ ಗಳಿಗೆ ಕೇರಿಯ ಯುವಕರ ವತಿಯಿಂದ ಶಾಲು ಹೊದೆಸಿ ಮಾಲಾರ್ಪಣೆ ಮಾಡಲಾಯಿತು.
ಮದ್ರಸಾ ಖಾದರಿಯ ದಾರುಲ್ ಉಲೂಮ್ ನ ಅಧ್ಯಕ್ಷ ಇಮ್ರಾನ್ ಗುಮ್ನಾಳ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸದಸ್ಯರಾದ ಆರಿಫ್, ಮುಸ್ತಾಕ್, ಸ್ಥಳೀಯ ಎಲ್ಲಾ ಮಸೀದಿ ಗಳ ಆಲಿಮ್ ಗಳು, ಪಟ್ಟಣದ ಮುಸ್ಲಿಂ ಸಮುದಾಯದ ಭಾಂದವರು ಹಾಜರಿದ್ದರು.

