ಹೋರಾಟದ ರೋಪರೇಷೆ ಗಳು ಪ್ರಸ್ತಾಪಿಸಿದ ಟೋಲ್ ಹೋರಾಟ ಸಮಿತಿ…..ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರತಿಭಟನಾ ಮೆರವಣಿಗೆಗೆ ಚಾಲನೆ…

The Siasat News - Images

ಶಿಕಾರಿಪುರ:07/10/2025

ತಾಲ್ಲೂಕಿನ ಕುಟ್ರಹಳ್ಳಿಯಲ್ಲಿ ಅಳವಡಿಸಲಾದ ಟೋಲ್ಗೇಟ್ ವಿರುದ್ಧ ದಿನಾಂಕ 09/10/2025 ರಂದು ನಡೆಯಲಿರುವ “ಶಿಕಾರಿಪುರ ಬಂದ್ ” ಪ್ರತಿಭಟನಾ ಮೆರವಣಿಗೆ ಪಟ್ಟಣದ ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನ ದಲ್ಲಿ ಬೆಳಗ್ಗೆ ಪೂಜೆ ಸಲ್ಲಿಸಿದ ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕ ಕಚೇರಿ ಎದುರಿರುವ ಪಾರ್ಕ್ ಹತ್ತಿರ ಬರಲಿದೆ ಎಂದು ಟೂಲ್ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಶಿವರಾಜ್ ಸುಣ್ಣದಕೊಪ್ಪ ಹೇಳಿದರು.

ಶಿರಾಳಕೊಪ್ಪದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಇವರು ಶ್ರೀ ಹುಚ್ಚರಾಯಸ್ವಾಮಿ ದೇವಸ್ಥಾನದಿಂದ ಹೊರಡಲಿರುವ ಪ್ರತಿಭಟನಾ ಮೆರವಣಿಗೆ ಪಿ ಎಲ್ ಡಿ ಬ್ಯಾಂಕ್ ರಸ್ತೆ ಮೂಲಕ ತಾಲೂಕು ಕಚೇರಿ ಎದುರುಗಡೆಯಿಂದ ದೊಡ್ಡಪೇಟೆಗೆ ಹೋಗಿ ಅಲ್ಲಿಂದ ಶಿರಾಳಕೊಪ್ಪ ಸರ್ಕಲ್ ಮಾರ್ಗವಾಗಿ ಶಿವಮೊಗ್ಗ ಸರ್ಕಲ್ ಮತ್ತು ತಾಲ್ಲೂಕು ಕಚೇರಿ ಎದುರಿರುವ ಪಾರ್ಕ್ ಗೆ ತಲುಪಲಿದೆ. ಈಗಾಗಲೇ ತಾಲೂಕಿನ ಎಲ್ಲಾ ವರ್ತಕರು ವ್ಯಾಪಾರಸ್ಥರು, ರೈತ ಪರ, ಕನ್ನಡಪರ ಸಂಘಟನೆಗಳು, ವಕೀಲರ ಸಂಘ,ಜವಳಿ ವ್ಯಾಪಾರಸ್ಥರ ಸಂಘ, ಹಿರಿಯ ನಾಗರೀಕರ ಕ್ಷೇಮಭಿವೃದ್ಧಿ ಸಂಘ, ಆಟೋಮೋಬೈಲ್ ಮಾಲೀಕರ ಸಂಘ, ಟ್ಯಾಕ್ಸಿ ಕ್ಯಾಬ್, ಬಸ್, ಲಾರಿ ಮತ್ತು ಆಂಬುಲೆನ್ಸ್ ಚಾಲಕರ ಮತ್ತು ಮಾಲಕರ ಸಂಘ, ಸೇರಿದಂತೆ ತಾಲೂಕಿನ ಎಲ್ಲಾ ವಿವಿಧ ಸಂಘಟನೆಗಳು ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಸುಮಾರು ಐದು ಸಾವಿರಕ್ಕಿಂತ ಹೆಚ್ಚಿನ ಜನ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಇತ್ತೀಚಿಗೆ ಮಾನ್ಯ ಜಿಲ್ಲಾಧಿಕಾರಿಗಳು ನೀಡಿದ ಹೇಳಿಕೆಯಂತೆ 9ನೇ ತಾರೀಕಿನ ಒಳಗೆ ಒಂದು ಟೋಲನ್ನು ತೆಗೆಯಲು ಸಿದ್ಧತೆ ನಡೆದಿದೆ ಅದಕ್ಕೆ ನಿಮ್ಮ ಪರಿಕ್ರೆಯೆ ಏನು? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವರಾಜ್ ಸುಣ್ಣದಕೊಪ್ಪ ಜಿಲ್ಲಾಧಿಕಾರಿಗಳ ಹೇಳಿಕೆ ತುಸು ನೆಮ್ಮದಿ ನೀಡಿದೆ ಆದರೆ ಕುಟ್ರಹಳ್ಳಿಯಲ್ಲಿರುವ ಟೋಲನ್ನು ತೆರವು ಗೊಳಿಸಿ ಅದರ ಅವಶೇಷಗಳು ಅಲ್ಲಿಂದ ವಿಲೇವಾರಿ ಮಾಡುವ ತನಕ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಖಡಕ್ಕಾಗಿ ಉತ್ತರ ನೀಡಿದರು.

The Siasat News - Images

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೋರಾಟ ಸಮಿತಿಯ ಮುಖಂಡ ಪುಟ್ಟನ ಗೌಡ್ರು ದ್ಯಾವನಗುಡ್ಡಿ ಟೋಲ್ ನಿಂದಾಗಿ ವಿಶೇಷವಾಗಿ ಶಿರಾಳಕೊಪ್ಪ ಭಾಗದ ರೈತರಿಗೆ ಬಡವರಿಗೆ ಕೂಲಿಕಾರ್ಮಿಕರಿಗೆ ಜನಸಾಮಾನ್ಯರಿಗೆ ಆರ್ಥಿಕ ಹೊರೆಯಾಗುತ್ತಿದ್ದು ತಾಳಗುಂದ ಮತ್ತು ಉಡಗಣಿ ಹೋಬಳಿಗಳ ಜನರು ಪ್ರತಿಭಟನೆಯಲ್ಲಿ ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಸಂಸದರು, ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ನಾಗರಾಜ್ ಗೌಡ್ರು ಸೇರಿದಂತೆ ತಾಲೂಕಿನ ಎಲ್ಲಾ ಪ್ರಮುಖ ರಾಜಕೀಯ ಪಕ್ಷದ ಮುಖಂಡರುಗಳಿಗೆ ಆಡಳಿತ ಮತ್ತು ವಿರೋಧ ಪಕ್ಷದ ಪ್ರಮುಖರಿಗೆ ಶಿಕಾರಿಪುರ ಬಂದ್ ಗೆ ಸಹಕಾರ ನೀಡಲು ಕೇಳಿಕೊಳ್ಳಲಾಗಿದೆ ಎಲ್ಲರಿಂದಲೂ ಕೊಡ ಸಕಾರಾತ್ಮಕ ಪ್ರತಿಕ್ರಿಯೆಗಳು ದೊರೆತಿವೆ. ತಾಲೂಕಿನ ಜನಸಾಮಾನ್ಯರು ಮಾಡುತ್ತಿರುವ ಈ ಟೋಲ್ ವಿರುದ್ಧದ ಪ್ರತಿಭಟನೆಯಲ್ಲಿ ಎಲ್ಲಾ ರಾಜಕೀಯ ಪ್ರತಿನಿಧಿಗಳು ರಾಜಕೀಯ ಪಕ್ಷಗಳ ಕಾರ್ಯಕರ್ತರು ತಮ್ಮ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಬಿಟ್ಟು ಸಾಮಾನ್ಯರಾಗಿ, ಸ್ಥಳೀಯರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡು ಜನರಿಗೆ ನ್ಯಾಯವನ್ನು ದೊರಕಿಸಿ ಕೊಡಬೇಕೆಂದು ಕೇಳಿಕೊಂಡರು.

ಹಿರಿಯ ಮುಖಂಡ ಲೋಕಪ್ಪ ರಟ್ಟಿಹಳ್ಳಿ ಮಾತನಾಡಿ ಶಿರಾಳಕೊಪ್ಪ ಪಟ್ಟಣದ ವರ್ತಕರು ವ್ಯಾಪಾರಸ್ಥರು, ದಿನಾಂಕ 09/10/2025 ರಂದು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಆಗ್ರಹಿಸಿದರು. ಸದರಿ ಪ್ರತಿಭಟನೆಗೆ ಸರ್ಕಾರಿ ಅಧಿಕಾರಿಗಳು ಮತ್ತು ಸರ್ಕಾರ ಸ್ಪಂದಿಸಿಲ್ಲ ಎಂದರೆ ಮುಂದಿನ ದಿನಗಳಲ್ಲಿ ಇಡೀ ತಾಲೂಕನ್ನು ಬಂದ್ ಮಾಡುವ ಮೂಲಕ ಉಗ್ರವಾಗಿ ಪ್ರತಿಭಟನೆ ಮಾಡಲಾಗುವುದು ಎಂದು ಗುಡುಗಿದರು.

ರೈತ ಸಂಘದ ಗೌರವಾಧ್ಯಕ್ಷ ಈರಣ್ಣ ಪ್ಯಾಟಿ, ಅಧ್ಯಕ್ಷ ರಾಜಣ್ಣ ಮುಗಳಿ ಕೊಪ್ಪ, ಶಿರಾಳಕೊಪ್ಪ ಪಟ್ಟಣ ಪಂಚಾಯತಿಯ ಮಾಜಿ ಅಧ್ಯಕ್ಷ ಎಚ್ ಎಂ ಚಂದ್ರಶೇಖರ್, ಮುಖಂಡ ವೀರೇಶ್ ಕೆಂಪಯ್ಯ ಇದ್ದರು.

ವರದಿ: ನವೀದ್ ಶಿರಾಳಕೊಪ್ಪ

Share the news!

Leave a Reply

Your email address will not be published. Required fields are marked *