ಶಿವಾಚಾರ್ಯ ಸ್ವಾಮೀಜಿಗಳ ಸದ್ಬೋಧನಾ ಪಾದಯಾತ್ರೆ: ಧಾರ್ಮಿಕ ಜಾಗೃತಿಗಾಗಿ ಸ್ವಾಮೀಜಿಗಳ ನಡಿಗೆ…

The Siasat News - Images

ಶಿರಾಳಕೊಪ್ಪ: 19/01/2026

ಧರ್ಮದ ಮೂಲ ತತ್ವಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮತ್ತು ಸಾಮಾಜಿಕ ಸಾಮರಸ್ಯವನ್ನು ಎತ್ತಿಹಿಡಿಯುವ ಉದ್ದೇಶದಿಂದ ‘ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ’ ಹಾಗೂ ‘ಕಡೆನಂದಿಹಳ್ಳಿಯ ಶ್ರೀ ಗುರು ರೇವಣಸಿದ್ದೇಶ್ವರ ಪುಣ್ಯಾಶ್ರಮ‘ದ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಕಡೆನಂದಿಹಳ್ಳಿ ಗ್ರಾಮದಲ್ಲಿ ಅದ್ಧೂರಿ ‘ ಶಿವಾಚಾರ್ಯರ ಸದ್ಬೋಧನಾ ಪಾದಯಾತ್ರೆ’ ನಡೆಯಿತು.

ಕಡೆನಂದಿಹಳ್ಳಿಯ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿಯವರ ನೇತೃತ್ವದಲ್ಲಿ ಆರಂಭವಾದ ಈ ಪಾದಯಾತ್ರೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಪಾದಯಾತ್ರೆಯ ಉದ್ದಕ್ಕೂ ವಿವಿಧ ಜಿಲ್ಲೆಗಳ ಮಠಾಧೀಶರು ಮತ್ತು ನೂರಾರು ಭಕ್ತಾದಿಗಳು ಪಾಲ್ಗೊಂಡು ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ ಸಾಗಿದರು.ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಳಲಿ ಮಠದ ಸ್ವಾಮೀಜಿಯವರು, “ನಮ್ಮ ಸಂಸ್ಕೃತಿಯಲ್ಲಿ ಪಂಚಾಚಾರ್ಯರು ನೀಡಿದ ತತ್ವಗಳು ಬದುಕಿಗೆ ದಾರಿದೀಪವಾಗಿವೆ. ವೀರಶೈವ ಧರ್ಮದ ಮೂಲ ತತ್ವಗಳಾದ ಗುರು, ಲಿಂಗ, ಜಂಗಮ, ಭಸ್ಮ, ರುದ್ರಾಕ್ಷಿ, ಮಂತ್ರ, ಪಾದೋದಕ ಮತ್ತು ಪ್ರಸಾದ ಎನ್ನುವ ಅಷ್ಟಾವರಣಗಳ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವುದು ಈ ಪಾದಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಈ ಆಚರಣೆಗಳು ಕೇವಲ ಒಂದು ಧರ್ಮಕ್ಕೆ ಸೀಮಿತವಲ್ಲ, ಇವುಗಳಿಂದ ಸಿಗುವ ಮಾನಸಿಕ ಶಾಂತಿ ಮತ್ತು ಸಂಸ್ಕಾರ ಸರ್ವ ಧರ್ಮೀಯರಿಗೂ ಲಭ್ಯವಾಗಬೇಕು ಎನ್ನುವುದು ನಮ್ಮ ಆಶಯ,” ಎಂದು ತಿಳಿಸಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆಯ ಬೆಂಗಳೂರು ಘಟಕದ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹಾಸನ, ಮಂಗಳೂರು, ಕೊಡಗು ಹಾಗೂ ಹಾವೇರಿ ಜಿಲ್ಲೆಗಳ ಜಿಲ್ಲಾ ಘಟಕಗಳ ಸ್ವಾಮೀಜಿಯವರು ಸಾಥ್ ನೀಡಿದ್ದರು.

ಪಾದಯಾತ್ರೆಯಲ್ಲಿ ವಿವಿಧ ಮಠಗಳ ಹಿರಿಯ ಸ್ವಾಮೀಜಿಯವರು ಕೇಸರಿ ಧ್ವಜಗಳನ್ನು ಹಿಡಿದು ಸಾಗಿದ್ದು ಗಮನ ಸೆಳೆಯಿತು.ಪಾದಯಾತ್ರೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ಭಕ್ತರು ಪೂರ್ಣಕುಂಭದೊಂದಿಗೆ ಸ್ವಾಮೀಜಿಯವರನ್ನು ಸ್ವಾಗತಿಸಿದರು. ಸ್ಥಳೀಯ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಕಾರ್ಯಕ್ರಮದ ಯಶಸ್ಸಿಗೆ ಕೈಜೋಡಿಸಿದ್ದರು.

ಗ್ರಾಮದ ಸದ್ಭಕ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದವರಿಗೆ ಪಾನಕ ಹಾಗೂ ಪ್ರಸಾದದ ವ್ಯವಸ್ಥೆ ಮಾಡಿದ್ದರು.

ವರದಿ:ನವೀದ್ ಶಿರಾಳಕೊಪ್ಪ 9538633929

Share the news!

Leave a Reply

Your email address will not be published. Required fields are marked *