ರಾಣಿಬೆನ್ನೂರ: 7-8-2025
ಪಟ್ಟಣದ ಆಂಗ್ಲೋ ಉರ್ದು ಪ್ರೌಢಶಾಲೆ ಯಲ್ಲಿ ಕಳೆದ ಸುಮಾರು ವರ್ಷಗಳಿಂದ ಭೋದಕರಾಗಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಶಿಕ್ಷಕ ಜನಾಬ್ ಅನೀಸ್ ಮೆಹಮೋದ್ ಖಾನ್ ಹರಿಹರ ರವರನ್ನು ಶಾಲೆಯ ಹಳೆ ವಿದ್ಯಾರ್ಥಿಗಳು ಗೌರವಿಸಿ, ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಡುಗೆ ಮಾಡುವುದರ ಮೂಲಕ ತಮ್ಮ ನೆಚ್ಚಿನ ಮೇಷ್ಟ್ರಿಗೆ ಗುರುವಂದನೆ ಅರ್ಪಣೆ ಮಾಡಿದ್ದಾರೆ.

ಬುಧವಾರ ಪಟ್ಟಣದ ಟಿಪ್ಪು ಸುಲ್ತಾನ್ ಮ್ಯಾರೇಜ್ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಹಾಲಿ ವಿದ್ಯಾರ್ಥಿಗಳು, ಶಾಲೆಯ ಹಳೆ ವಿದ್ಯಾರ್ಥಿಗಳು ಮತ್ತು ಪಟ್ಟಣದ ನಿವಾಸಿಗಳು ಸೇರಿ ಒಗ್ಗಟ್ಟಿನಿಂದ ಕಳೆದ ಸುಮಾರು ಮೂವತ್ತು ವರ್ಷ ಸೇವೆ ಸಲ್ಲಿಸಿ, ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶ್ರಮಿಸಿದ ಶಿಕ್ಷಕನಿಗೆ ಹಬ್ಬದ ಮಾದರಿಯಲ್ಲಿ ಸನ್ಮಾನಿಸಿ, ಗೌರವಿಸಿ ವಿಜೃಂಭಣೆಯ ಬೀಳ್ಕೊಡುಗೆಯನ್ನು ಮಾಡಿದರು.

ವಿಶೇಷವಾಗಿ ಶಾಲೆಯ 1999-2000 ವರ್ಷದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಆಯೋಜಿಸಲ್ಪಟ್ಟ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಎಲ್ಲಾ ಹಳೆಯ ವಿದ್ಯಾರ್ಥಿಗಗಳಿಗೆ, ಪೋಷಕರಿಗೆ ಮತ್ತು ಶಾಲೆಯ ಶಿಕ್ಷಕರಿಗೆ, ಸಿಬ್ಬಂದಿ ಗಳಿಗೆ ಆಹ್ವಾನ ನೀಡಲಾಗಿತ್ತು. ಹಲವಾರು ವರ್ಷಗಳ ನಂತರ ಎಲ್ಲರೂ ಜೊತೆಗೂಡಿ, ಶಾಲಾ ಆವರಣದಲ್ಲಿ ಸೇರಿ ತಮ್ಮ ಹಳೆಯ ನೆನಪುಗಳನ್ನು ಮರುಕಳಿಸಿಕೊಂಡ 1999-2000 ಇಸವಿಯ ಹತ್ತನೇ ತರಗತಿಯ ತಂಡ ಬಾಲ್ಯದಲ್ಲಿ ಆಡಿದ ಆಟಗಳನ್ನು ಆಡುವುದರ ಮೂಲಕ ಹಿಂದಿನ ನೆನಪನ್ನು ಮೆಲುಕಿಹಾಕಿದರು, ಸಂಭ್ರಮ, ಸಂತಸ ಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಲೆಯ ಹಳೆವಿದ್ಯಾರ್ಥಿ ಉದ್ಯಮಿ ಸಲೀಂ ಖಟಾರಿ ಶಾಲೆಯ ಶಿಕ್ಷಕರಾಗಿ ಬಂದ ಶ್ರೀಯುತರು ಕೇವಲ ಪಾಠ ಮಾಡುವುದು ತಮ್ಮ ಜವಾಬ್ದಾರಿ ಎಂಬ ಮನೋಭಾವನೆಯನ್ನು ತೊರೆದು ಪಟ್ಟಣದ ಇತರೆ ಜನರ

ಸಹಕಾರದೊಂದಿಗೆ ನಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿದರು. ಇವರಿಂದ ಕಲಿತ ಮಕ್ಕಳು ಉತ್ತಮ ವ್ಯಾಸಂಗದ ಜೊತೆಗೆ ಸಮಾಜದಲ್ಲಿ ಉತ್ತಮ ಜೀವನವನ್ನು ಮಾಡುತ್ತಿದ್ದಾರೆ. ನಮ್ಮ ಬಾಲ್ಯದಲ್ಲಿ ತಪ್ಪು ಮಾಡಿದಾಗಲೆಲ್ಲ ನಮ್ಮನ್ನು ಪ್ರೀತಿಯಿಂದ ತಿದ್ದಿ ತೀಡಿ ಒಳ್ಳೆಯ ಮನುಷ್ಯರನ್ನಾಗಿ ಮಾಡಿದ ಕೀರ್ತಿ ಶ್ರೀಯುತರಿಗೆ ಸಲ್ಲುತ್ತದೆ. ನಮ್ಮಗಳ ಮೆಚ್ಚಿನ ಶಿಕ್ಷಕರ ನಿವೃತ್ತಿ ಹೊಂದಿದ ಈ ಸಂದರ್ಭದಲ್ಲಿ ನಾವೆಲ್ಲರೋ ಹಳೆಯ ಗೆಳೆಯರು ಒಂದಾಗಿದ್ದು ಅತೀವ ಸಂತೋಷ ಮತ್ತು ಉತ್ಸಾಹ ತಂದಿದೆ. ಈ ದಿನ ನಾವು ಮತ್ತೆ ಚಿಣ್ಣರಾಗಿದ್ದೇವೆ ಎಂದು ಹರ್ಷ ವ್ಯಕ್ತ ಪಡಿಸಿದರು.
ಸನ್ಮಾನ ಸ್ವೀಕರಿಸಿ ಶಿಕ್ಷಕ ಜನಾಬ್ ಅನೀಸ್ ಮೆಹಮೋದ್ ಖಾನ್ ಹರಿಹರಮಾತನಾಡಿ ಊರಿನವರು, ಮತ್ತು ಹಳೆಯ ವಿದ್ಯಾರ್ಥಿಗಳು ಎಲ್ಲರೂ ಸೇರಿ ನನ್ನ ಸೇವೆಯನ್ನು ಸ್ಮರಿಸಿಕೊಂಡು ಸನ್ಮಾನ ಮಾಡುತ್ತಿರುವುದು ಬಹಳ ಸಂತಸ ತಂದಿದೆ ಈ ತರಹದ ಗುರುತುವಿಸುವಿಕೆ ಯಾವ ಪ್ರಶಸ್ತಿಯಿಂದ ಕಮ್ಮಿ ಇಲ್ಲ ಈದಿನ ವಿಶೇಷವಾಗಿ ಈ ಹುಡುಗರ ತಂಡ ಸಮಾರಂಭೋತ್ಸವ ನಡೆಸಿ ಅಂದಾಜು 1000 ಕ್ಕಿಂತ ಜಾಸ್ತಿ ಸಂಖ್ಯೆ ಯಲ್ಲಿ ಕಾರ್ಯಕ್ರಮಕ್ಕೆ ಬಂದವರನ್ನು ಊಟದ ವ್ಯವಸ್ಥೆ ಸಹಿತ ಮಾಡಿದ್ದು ಸಮಾಜದಲ್ಲಿ ಶಿಕ್ಷಣ ಮತ್ತು ಶಿಕ್ಷಕನಿಗೆ ಗೌರವ ಕಡಿಮೆಯಾಗಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಎಲ್ಲರ ಪ್ರೀತಿಗೆ ನಾನು ಮತ್ತು ನನ್ನ ಕುಟುಂಬ ಚಿರಋಣಿ ಯಾಗಿದ್ದೇವೆಂದರು.
ಅಂಜುಮನ್ ಇಸ್ಲಾಮ್ ಅಧ್ಯಕ್ಷರಾದ ಹುಸೇನ್ ಸಾಬ್ ಬಿದ್ರಿ, ನಗರ ಸಭೆ ಸದಸ್ಯ ಖಾಜಿ ನೂರುಲ್ಲ, ಕಾಂಗ್ರೆಸ್ ಮುಖಂಡ ಶೇರು ಖಾನ್ ಕಾಬುಲಿ, ಶಾಲೆಯ ಹಳೆ ವಿದ್ಯಾರ್ಥಿ ಗಳಾದ ದಾದಾಪೀರ್ ಕೊಳೂರ್, ಜಾಫರ್ ಕಿಲ್ಲದಾರ್, ಮನ್ಸೂರ್ ಜಮಾದಾರ್, ರಹ್ಮಾನ್ ಕಿಲ್ಲದಾರ್, ಇಮ್ರಾನ್ ಶಿರಾಡಿ, ಜಾಫರ್ ಹಲಗೇರಿ ಹಾಗೂ ನೂರಾರು ವಿದ್ಯಾರ್ಥಿ ಗಳು, ಪೋಷಕರು ಇದ್ದರು.
ವರದಿ: ನವೀದ್ ಶಿರಾಳಕೊಪ್ಪ 9538633929

