ಶಿರಾಳಕೊಪ್ಪ: 01/11/2024.
ಕನ್ನಡಿಗರು ಸ್ವಾಭಿಮಾನಿಗಳು , ಕನ್ನಡಿಗರು ಶಿಸ್ತಿನ ಸಿಪಾಯಿಗಳು, ಇಂತಹ ನಾಡಲ್ಲಿ ನಾವು ಹುಟ್ಟಿದ್ದು ನಮ್ಮ ಪೂರ್ವ ಜನ್ಮದ ಫಲ ಎಂದು ಪಟ್ಟಣದ ಪೊಲೀಸ್ ಠಾಣಿ ಉಪ ನಿರೀಕ್ಷಕ ಪ್ರಶಾಂತ ಕುಮಾರ್ ಅಭಿಪ್ರಾಯ ವ್ಯಕ್ತ ಪಡಿಸಿದರು.

ಪಟ್ಟಣದ ಬಸ್ಟ್ಯಾಂಡ್ ನಲ್ಲಿ ಮಲೆನಾಡು ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ಹಾಗೂ ಜೈ ಕರ್ನಾಟಕ ಆಟೋ ಚಾಲಕರ ಸಂಘದ ವತಿಯಿಂದ ನಡೆದ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ದೇಶದಲ್ಲೇ ಅತ್ಯಂತ ಗೌರವಪೂರ್ವಕ ರಾಜ್ಯ ಕರ್ನಾಟಕ ರಾಜ್ಯ, ಕನ್ನಡಿಗರ ರಾಜ್ಯವಾಗಿದ್ದು ಇಲ್ಲಿ ಹುಟ್ಟಿರುವ ನಾವೆಲ್ಲರೂ ಧನ್ಯರು. ಹೊರಗಿಂದ ಬಂದ ಪ್ರತಿಯೊಬ್ಬರಿಗೂ ಪ್ರೀತಿಯಿಂದ ಕಾಣುವ ಪರಿಕಲ್ಪನೆ ನಮ್ಮಲ್ಲಿದೆ ಇದೆ. ನಮ್ಮ ವರ್ತನೆ ಮತ್ತು ಸ್ವಾಮ್ಯ ಸ್ವಭಾವದಿಂದ ಬೇರೆಯವರೂ ಕೊಡ ನಮ್ಮ ಕಡೆ ತಿರುಗಿ ನೋಡುವಹಾಗೆ ನಮ್ಮ ಭಾಷೆಯನ್ನು ಅವರೂ ಕೊಡ ಕಲಿಯುವ ಹಾಗೆ ಮಾಡಬೇಕು.
ನಮ್ಮ ಮಕ್ಕಳ ವಿದ್ಯಾಭ್ಯಾಸ ಹೊತ್ತಲ್ಲಿ ಆಂಗ್ಲ ಮಾಧ್ಯಮದ ವ್ಯಾಮೋಹ ಬಿಟ್ಟಿ ಕನ್ನಡದಲ್ಲೇ ವಿದ್ಯಾ ಭ್ಯಾಸ ಕೊಡಿಸುವ ಕಡೆ ನಾವುಗಳು ಗಮನ ಹರಿಸಿದರೆ ನಮ್ಮ ಮಕ್ಕಳು ನಮ್ಮತನ ವನ್ನು ಕಲಿಯುತ್ತಾರೆ ಎಂದರು.

ಪಟ್ಟಣ ಪಂಚಾಯತಿ ಮಾಜಿ ಸದಸ್ಯ ಹಾಗೂ ಹಿರಿಯ ಮುಖಂಡ ಐ ಎಂ ಶಿವಾನಂದ ಸ್ವಾಮಿ ಮಾತನಾಡಿ ಪಟ್ಟಣದಲ್ಲಿ ನಮ್ಮ ವಿದ್ಯಾರ್ಧಿದಿಶೇಯಿಂದಲೂ ಕನ್ನಡ ಸಂಘವನ್ನು ಕಟ್ಟಿಕೊಂಡು ಅಂದಿನ ಯುವಕರಾದ ನಾವೆಲ್ಲ ರಾಜ್ಯೋತ್ಸವವನ್ನು ಆಚರಿಸುತ್ತಿದ್ದೆವು. ವಿದ್ಯಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಲವಾರು ಸಾಂಸ್ಕೃತಿಕ ಚಟುವಟಿಕೆಗಳನ್ನು ಮತ್ತು ಅದಕ್ಕೆ ತಕ್ಕ ಹಾಗೆ ಬಹುಮಾನ ಗಳನ್ನು ಕೊಡುವುದರ ಮೂಲಕ ಮಕ್ಕಳಲ್ಲಿ ಕನ್ನಡ ಪ್ರೇಮವನ್ನು ಬೆಳೆಸುವ ಕೆಲಸ ಮಾಡಲಾಗುತ್ತಿತ್ತು. ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಗಳು ದೀಪಾವಳಿ ಹಬ್ಬದಂತೆ ನಡೆಯುತ್ತಿದ್ದವು ಆದರೆ ಇತ್ತೀಚಿಗೆ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವು ಬರೀ ಸರಕಾರಿ ಶಾಲೆಗಳಿಗೆ ಮತ್ತು ಸರಕಾರಿ ಕಚೇರಿಗಳು ಹಾಗೂ ನಿಮ್ಮಂತಹ ಆಟೋ, ಟ್ಯಾಕ್ಸಿ, ಮತ್ತು ಬಸ್ಸು ಗಳ ಸಂಘಗಳಿಗೆ ಮಾತ್ರ ಸೀಮಿತವಾಗಿಬಿಟ್ಟಿದೆ.

ಇಂದು ಕೆಲಸದ ಒತ್ತಡ ಹಾಗೂ ಕನ್ನಡ ಮೇಲಿನ ನಿರಭಿಮಾನದಿಂದಾಗಿ ರಾಜ್ಯೋತ್ಸವ ಕಾರ್ಯಕ್ರಮಗಳು ತನ್ನ ಅಸಲಿ ರಂಗನ್ನು ಕಳೆದುಕೊಂಡಿದೆ. ನಮ್ಮ ಬದುಕಿನ ರಥವನ್ನು ನಡೆಸಲಿಕ್ಕೆ ಅವಕಾಶವನ್ನು ಮಾಡಿಕೊಟ್ಟಿರುವಂತಹ ನಮ್ಮ ಭಾಷೆ ಯನ್ನು ಯಾವುದೇ ಕಾರಣಕ್ಕೂ ಮರೆಯದೆ ಕನ್ನಡಪರ ಅಭಿಮಾನವನ್ನು ವ್ಯಕ್ತ ಪಡಿಸಬೇಕು. ಕನ್ನಡಾಭೀಮಾನ ವಿಚಾರದಲ್ಲಿ ನಮ್ಮ ಆಟೋ, ಟ್ಯಾಕ್ಸಿ, ಮತ್ತು ಬಸ್ ಚಾಲಕರು ಮತ್ತು ಮಾಲಕರ, ಕಾಳಜಿ ಮತ್ತು ಕಳವಳ ಪ್ರಶಂಸನೀಯ ಎಂದರು.
ಯುವ ಮುಖಂಡ ರಾಘವೇಂದ್ರ ಮೂಗುವೀರ, ಆರೋಗ್ಯ ಇಲಾಖೆಯ ಡಾಕ್ಟರ್ ಜಾಧವ್, ಪವನ್ ಕಲಾಲ್, ಸಮಾಜ ಸೇವಕ ನವೀದ್ ಶಿರಾಳಕೊಪ್ಪ ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ಸಂಘದ ಅಧ್ಯಕ್ಷ ಶಶಿ ತಾಳಗುಂದ ಮಾತನಾಡಿದರು.
ಈ ಸಂಧರ್ಭದಲ್ಲಿ ಪುರಸಭೆ ಅಧ್ಯಕ್ಷೆ ಮಮತಾ ನಿಂಗಪ್ಪ, ಬಸ್ ಮಾಲೀಕ ಮುಬಾರಕ್, ರಹ್ಮತುಲ್ಲ ಹಿರಿಯ ಮುಖಂಡ ಮುರುಗಯ್ಯ ಸ್ವಾಮಿ,ಟ್ಯಾಕ್ಸಿ ಮಾಲಕರ ಮತ್ತು ಚಾಲಕರ ಸಂಘದ ಗೌರವ ಅಧ್ಯಕ್ಷ ಸಿದ್ದಲಿಂಗ ಸ್ವಾಮಿ, ಸದಸ್ಯರಾದ ಸಂತೋಷ್ ಕುಬಸದ, ಬೆಂಗಳೂರು ಮಂಜು, ನಾಗರಾಜ ಬೆಳ್ಳಿಗಾವಿ, ಚಂದ್ರು ಮಾಳಗೊಂಡನಕೊಪ್ಪ, ಜೈ ಕರ್ನಾಟಕ ಆಟೋ ಸಂಘದ ಅಧ್ಯಕ್ಷ ಹಬೀಬ್, ಸದಸ್ಯರಾದ ಮೈಲಾರಿ, ಅರುಣ್ ಕುಮಾರ್, ದಾದಾ ಪೀರ್ ಮುಂತಾದವರು ಇದ್ದರು.
ವರದಿ: ನವೀದ್ ಶಿರಾಳಕೊಪ್ಪ

